ಚರ್ಚಿಲ್, ವಿನ್‍ಸ್ಟನ್

1871-1947. ಅಮೆರಿಕದ ಕಾದಂಬರಿಕಾರ. ಸೇಂಟ್ ಲೂಯಿಯಲ್ಲಿ ಜನಿಸಿ ಅಲ್ಲಿನ ಪಬ್ಲಿಕ್ ಸ್ಕೂಲಿನಲ್ಲಿ ವಿದ್ಯಾಭ್ಯಾಸ ಮಾಡಿ, ಅನ್ನಪಾಲಿಸ್‍ನ ನೌಕಾ ಅಕಾಡೆಮಿಯಲ್ಲಿ ಪದವಿ ಪಡೆದ (1894). ಕೆಲವು ಕಾಲ ಆರ್ಮಿ ಅಂಡ್ ನೇವಿ ಜರ್ನಲ್‍ನಲ್ಲಿ ಲೇಖಕನಾಗಿಯೂ ಅನಂತರ ಕಾಸ್ಮೊಪಾಲಿಟನ್ ಮ್ಯಾಗಜೀನಿನ ಕಾರ್ಯನಿರ್ವಾಹಕ ಸಂಪಾದಕನಾಗಿಯೂ ಕೆಲಸ ಮಾಡಿದ. 1900-1905ರ ಅವಧಿಯಲ್ಲಿ ನ್ಯೂ ಹ್ಯಾಂಪ್‍ಷೈರ್‍ನ ಗೌರ್ನರ್ ಪದವಿಗೆ ಪ್ರಗತಿಶೀಲ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತ.

ಜೀವನಕ್ಕೆ ಬೇಕಾದ ಅನುಕೂಲಗಳಿದ್ದುದರಿಂದ ಚರ್ಚಿಲ್ ಬರೆವಣಿಗೆಯನ್ನೇ ವೃತ್ತಿಯಾಗಿ ಕೈಗೊಂಡು ಅನೇಕ ಕಾದಂಬರಿಗಳನ್ನು ಬರೆದ. ಮೊದಲ ಕಾದಂಬರಿಯಾದ ದಿ ಸೆಲೆಬ್ರಿಟಿ 1898ರಲ್ಲಿ ಪ್ರಕಟವಾಯಿತು. ರಿಚರ್ಡ್ ಕಾರ್‍ವಾಲ್ (1899) ಕ್ರಾಂತಿಗೊಳಗಾದ ಮೇರಿಲ್ಯಾಂಡನ್ನು ಕುರಿತದ್ದು. ಸುಮಾರು ಹತ್ತು ಲಕ್ಷ ಪ್ರತಿಗಳು ಖರ್ಚಾದುದು ಇದರ ಜನಪ್ರಿಯತೆಗೆ ಗುರುತು. ಮುಂದೆ ಪ್ರಕಟವಾದ ದಿ ಕ್ರೈಸಿಸ್ (1901), ದಿ ಕ್ರಾಸಿಂಗ್ (1904) ಮೊದಲಾದವು ಅಮೆರಿಕ ದೇಶದ ಅಂತರ್ಯುದ್ಧದ ಹಿನ್ನೆಲೆಯನ್ನು ವಸ್ತುವನ್ನಾಗುಳ್ಳ, ಕೆಂಟಕಿ ಸಾಹಸಗಳನ್ನು ನಿರೂಪಿಸುವ ಕಥೆಗಳು. ಕ್ರೈಸಿಸ್ ಪ್ರಕಟವಾದೊಡನೆ ಚರ್ಚಿಲ್ ಅಮೆರಿಕದ ಮುಖ್ಯ ಕಾದಂಬರಿಕಾರರಲ್ಲಿ ಒಬ್ಬನೆಂಬ ಖ್ಯಾತಿಯನ್ನು ಗಳಿಸಿದ. ಕಾನಿಸ್ಟನ್ (1906), ಮಿಸ್ಟರ್ ಕ್ರೂಯಿಸ್ ಕೆರಿಯರ್ (1908) ರಾಜಕೀಯ ಸಮಸ್ಯೆಗಳನ್ನು ಉಳ್ಳಂಥವು. ದಿ ಇನ್‍ಸೈಡ್ ಆಫ್ ದಿ ಕಪ್ (1913), ಎ ಫಾರ್ ಕಂಟ್ರಿ (1915) ಧಾರ್ಮಿಕ ಅಥವಾ ಸಾಮಾಜಿಕ ಪ್ರಶ್ನೆಗಳನ್ನು ವಿಶ್ಲೇಷಿಸುವ ಕಾದಂಬರಿಗಳು. ಎ ಮಾಡರ್ನ್ ಕ್ರಾನಿಕಲ್ (1910), ದಿ ಡ್ವೆಲ್ಲಿಂಗ್ ಪ್ಲೇಸ್ ಆಫ್ ಲೈಟ್ (1917) ದಿ ಅನ್‍ಚಾರ್ಟೆಡ್ ವೇ (1941) ಎಂಬುವು ಇವನ ಇತರ ಕೃತಿಗಳು. ಅಮೆರಿಕದ ಗತಕಾಲದ ಚಿತ್ರಗಳ ಮೂಲಕ ತನ್ನ ನಾಡಿನ ರೋಮಾಂಚಕಾರಿ ಇತಿಹಾಸವನ್ನು ಸೃಷ್ಟಿಸುವುದರಲ್ಲಿ ಯಶಸ್ವಿಯಾದ ಕೆಲವೇ ಲೇಖಕರಲ್ಲಿ ಇವನೂ ಒಬ್ಬ.								(ಎಚ್.ಜಿ.ಎಸ್.ಆರ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ